kenduli
portal

ಬೆಂಗಳೂರಿಗೆ ಬಂದ್‌ ಬಿಸಿ

27

ಬಸ್‌ಗಳ ಮೇಲೆ ಕಲ್ಲು ತೂರಾಟ, ಪ್ರಯಾಣಿಕರ ಪರದಾಟ
ಬೆಂಗಳೂರು, ಜ. ೯- ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಾರ್ಮಿಕ ಸಂಘಟನೆಗಳು ಕರೆನೀಡಿರುವ ಎರಡು ದಿನಗಳ ಭಾರತ್ ಬಂದ್‌ಗೆ ನಿನ್ನೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿರುವ ಬೆನ್ನಲ್ಲೇ ಇಂದು ಬೆಂಗಳೂರು ಸೇರಿದಂತೆ, ರಾಜ್ಯದ ವಿವಿಧ ಭಾಗಗಳಲ್ಲಿ 60ಕ್ಕೂ ಹೆಚ್ಚು ಸಾರಿಗೆ ಸಂಸ್ಥೆ ಬಸ್‌ಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರಿಂದ ಸಾರಿಗೆ ಸಂಸ್ಥೆ ಬಸ್‌ಗಳು ಜಖಂಗೊಂಡಿದ್ದು, ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಭಾರತ್ ಬಂದ್ ಎರಡನೇ ದಿನ.
ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿಯ 60ಕ್ಕೂ ಹೆಚ್ಚು ಬಸ್‌ಗಳ ಮೇಲೆ ಕಲ್ಲು ತೂರಾಟ.
47ಕ್ಕೂ ಅಧಿಕ ಬಿಎಂಟಿಸಿ ಹಾಗೂ 12ಕ್ಕೂ ಅಧಿಕ ಕೆಎಸ್‌ಆರ್‌ಟಿಸಿ ಬಸ್‌ಗಳು ಜಖಂ.
ವೋಲ್ವೊ ಚಾಲಕನ ಕಣ್ಣಿಗೆ ಗಂಭೀರ ಗಾಯ.
ಮಿಂಟೋ ಕಣ್ಣಾಸ್ಪತ್ರೆಗೆ ದಾಖಲು.
ಬಸ್‌ಗಳಿಲ್ಲದೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಪರದಾಟ.
ಹಲವೆಡೆ ಸಾರಿಗೆ ಸಂಸ್ಥೆ ಅಧಿಕಾರಿಗಳ ನಡುವೆ ಮಾತಿನ ಚಕಮಕಿ.
ಹಲವು ಕಡೆ ಕೈಗಾರಿಕಾ ಪ್ರದೇಶಗಳು ಬಂದ್.
ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಬಂದ್ ಮಾಡಿದ್ದರಿಂದ ಪ್ರಯಾಣಿಕರು ಹಾಗೂ ಶಾಲಾ ಮಕ್ಕಳಿಗೆ ಬಂದ್ ಬಿಸಿ ತಟ್ಟಿದ್ದು, ಸಾರ್ವಜನಿಕರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಸಾರಿಗೆ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಬೆಂಗಳೂರಿನಲ್ಲಿ 3 ಸಾವಿರಕ್ಕೂ ಅಧಿಕ ಬಿಎಂಟಿಸಿ ಬಸ್‌ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಅಲ್ಲೊಂದು – ಇಲ್ಲೊಂದು ಓಡಾಡುತ್ತಿದ್ದ ಬಸ್‌ಗಳ ಸಂಚಾರಕ್ಕೂ ಚಾಲಕರು, ನಿರ್ವಾಹಕರು ಹೆದರುವಂತಾಗಿದೆ.

ಮಾತಿನ ಚಕಮಕಿ
ಏಕಾಏಕಿ ಬಿಎಂಟಿಸಿ ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಿದ್ದರಿಂದ ಪ್ರಯಾಣಿಕರು ಹಾಗೂ ಸಾರಿಗೆ ಅಧಿಕಾರಿಗಳ ನಡುವೆ ಮಾತಿನ ಚಕಮಕಿ, ಗದ್ದಲಕ್ಕೂ ಅವಕಾಶ ಮಾಡಿಕೊಟ್ಟ ಘಟನೆ ಮೆಜೆಸ್ಟಿಕ್ ಸೇರಿದಂತೆ, ಹಲವು ಭಾಗಗಳಲ್ಲಿ ನಡೆದಿದೆ.
ಬೆಳಿಗ್ಗೆ ಬಸ್ ಸಂಚಾರ ಆರಂಭವಾಗುವ ಸಂದರ್ಭದಲ್ಲಿ ವಿವಿಧೆಡೆ ಕಿಡಿಗೇಡಿಗಳು ಬಸ್ ಮೇಲೆ ಕಲ್ಲು ತೂರಾಟ ನಡೆಸಿ ಜಖಂ ಮಾಡಿದ್ದರಿಂದ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಬೆಂಗಳೂರಿನ ವಿವಿಧ ಭಾಗಗಳಲ್ಲಿ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು ಅರೆಬೆತ್ತಲೆ ಮೆರವಣಿಗೆ, ಬೈಕ್ ಱ್ಯಾಲಿ, ಪಾದಯಾತ್ರೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನೆಲಮಂಗಲದ ಸೋಂಪುರ ಕೈಗಾರಿಕಾ ಪ್ರದೇಶ ಸಂಪೂರ್ಣ ಸ್ತಬ್ಧವಾಗಿದ್ದು, ಈ ಭಾಗದಲ್ಲಿ ಪ್ರತಿಭಟನಾಕಾರರು ಬೈಕ್ ಱ್ಯಾಲಿ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಿನ್ನೆ ಬಿಎಂಟಿಸಿ ಬಸ್‌ಗಳು ಸಂಚಾರಕ್ಕೆ ಸಿದ್ಧವಿದ್ದರೂ ಪ್ರಯಾಣಿಕರ ಸಂಖ್ಯೆ ಕಡಿಮೆಯಿತ್ತು. ಇಂದು ಪ್ರಯಾಣಿಕರಿದ್ದರೂ ಬಿಎಂಟಿಸಿ ಬಸ್‌ಗಳಿಲ್ಲದೆ, ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುವ ಪ್ರಯಾಣಿಕರು ತೊಂದರೆ ಅನುಭವಿಸುವಂತಾಯಿತು.

ರಾಯಚೂರು ಮತ್ತು ಬಳ್ಳಾರಿಯಲ್ಲಿ ಸರ್ಕಾರಿ ಶಾಲಾ – ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇನ್ನುಳಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಎಂದಿನಂತೆ ಶಾಲಾ – ಕಾಲೇಜುಗಳಿದ್ದವು. ಸಾರಿಗೆ ಬಸ್ ನಂಬಿಕೊಂಡು ಶಾಲಾ – ಕಾಲೇಜುಗಳಿಗೆ ಬಂದಿದ್ದ ವಿದ್ಯಾರ್ಥಿಗಳು ಶಾಲೆಗೂ ಹೋಗದೆ, ಮನೆಗೂ ತೆರಳಲಾಗದಂತಹ ಪರಿಸ್ಥಿತಿ ಗೆ ಸಿಲುಕುವಂತಾಗಿದೆ.
ತುಮಕೂರು, ಮಂಡ್ಯ, ಹಾಸನ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಮೈಸೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಕಲಬುರಗಿ ಸೇರಿದಂತೆ, ರಾಜ್ಯದ ವಿವಿಧ ಭಾಗಗಳಲ್ಲಿ ಬಂದ್‌ನ ಬಿಸಿ ಮುಟ್ಟಿದೆ.

ರಾಮನಗರದಲ್ಲಿ 5, ಬಳ್ಳಾರಿಯಲ್ಲಿ 4, ನೆಲಮಂಗಲದಲ್ಲಿ 3 – 4 ಹಾಗೂ ಬೆಂಗಳೂರಿನಲ್ಲಿ 12ಕ್ಕೂ ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ ದಾಳಿ ನಡೆಸಿ, ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ.
ಬೆಂಗಳೂರಿನಲ್ಲಿ 47ಕ್ಕೂ ಅಧಿಕ ಬಿಎಂಟಿಸಿ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ವೋಲ್ವೊ ಬಸ್ ಚಾಲಕ ಅಜಿತ್ ಹುಲಿಮನಿ ಎಂಬುವವರಿಗೆ ಕಣ್ಣಿಗೆ ಗಂಭೀರ ಹಾನಿಯಾಗಿದ್ದು, ಅವರನ್ನು ಮಿಂಟೋ ಕಣ್ಣಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ನಡುವೆ ಅಡಕಮಾರನಹಳ್ಳಿ, ಜಾಲಹಳ್ಳಿ, ವಿಮಾನ ನಿಲ್ದಾಣ ಸೇರಿದಂತೆ, ವೋಲ್ವೊ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಮಾದನಾಯಕನಹಳ್ಳಿ, ಕಡಬಗೆರೆ ಕ್ರಾಸ್, ನೆಲಮಂಗಲ, ತಾವರೆಕೆರೆ ಸೇರಿದಂತೆ, ಹಲವೆಡೆ 12ಕ್ಕೂ ಅಧಿಕ ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಬಸ್ ಸಂಚಾರವನ್ನು ನಿಲ್ಲಿಸಲಾಗಿದೆ.

ವಿವಿಧೆಡೆಯಿಂದ ಬೆಂಗಳೂರಿನ ಹೃದಯಭಾಗ ಮೆಜೆಸ್ಟಿಕ್‌ಗೆ ಬಂದ ಪ್ರಯಾಣಿಕರು ತಮ್ಮ ಸ್ಥಳಗಳಿಗೆ ತೆರಳಲು ಯಮಯಾತನೆ ಅನುಭವಿಸುವಂತಾಯಿತು.
ಇಂದು ಬೆಳಿಗ್ಗೆ ಸಂಚಾರ ಆರಂಭಿಸಲು ಮುಂದಾದ ಸಾರಿಗೆ ಸಂಸ್ಥೆ ಬಸ್‌ಗಳಿಗೆ ಅಲ್ಲಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರಿಂದ ಮರಳಿ ಡಿಪೋಗಳತ್ತ ಬಸ್‌ಗಳು ತೆರಳಿದವು.
ಅಲ್ಲೊಂದು – ಇಲ್ಲೊಂದು ಇದ್ದ ಬಸ್‌ಗಳಲ್ಲಿ ಜನರು ತಮ್ಮ ತಮ್ಮ ಸ್ಥಳಗಳಿಗೆ ತೆರಳಲು ಮುಗಿಬಿದ್ದಿದ್ದರಿಂದ ಬಸ್‌ಗಳು ತುಂಬಿ ತುಳುಕಾಡುವಂತಾಯಿತು.

Comments are closed.