kenduli
portal

ಸರ್ವರ ವಿಕಾಸ ಬಿಜೆಪಿ ಮಂತ್ರ – ಮೋದಿ

28

ಸೊಲ್ಲಾಪುರ, ಜ. ೯- ಸಾಮಾನ್ಯ ವರ್ಗದ ಆರ್ಥಿಕವಾಗಿ ಹಿಂದುಳಿದ ಬಡಜನರಿಗೆ ಮೀಸಲಾತಿ ವಿಷಯದಲ್ಲಿ ದೇಶದ ಜನರ ಮುಂದೆ ಸುಳ್ಳುಗಳನ್ನು ಹೇಳುತ್ತಿದ್ದ ಮಂದಿಗೆ ಮೀಸಲಾತಿ ಮಸೂದೆ ತಕ್ಕ ಉತ್ತರ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಎಲ್ಲರೊಂದಿಗೂ ಎಲ್ಲರ ವಿಕಾಸ ಮಂತ್ರದಲ್ಲಿ ನಂಬಿಕೆ ಇಟ್ಟಿದೆ. ಹೀಗಾಗಿ ದೇಶದ ಎಲ್ಲಾ ವರ್ಗದ ಜನರು ಆರ್ಥಿಕವಾಗಿ, ಸಾಮಾಜಿಕವಾಗಿ ಮೇಲೆ ಬರಬೇಕು ಎನ್ನುವುದು ನಮ್ಮ ಉದ್ದೇಶ ಎಂದು ಹೇಳಿದರು.
ಕರ್ನಾಟಕ – ಮಹಾರಾಷ್ಟ್ರದ ಗಡಿಭಾಗದಲ್ಲಿ 1,100 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿರುವ ರಾಷ್ಟ್ರೀಯ ಹೆದ್ದಾರಿ 9 ಹಾಗೂ 1,811 ಕೋಟಿ ರೂ. ವೆಚ್ಚದ ಭೂಗತ ಒಳಚರಂಡಿ ವ್ಯವಸ್ಥೆಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಮೀಸಲಾತಿ ವಿಷಯದಲ್ಲಿ ಸುಳ್ಳುಗಳನ್ನು ಆಡುತ್ತಿರುವ ಕಾಂಗ್ರೆಸ್ ಸೇರಿದಂತೆ, ಪ್ರತಿಪಕ್ಷಗಳಿಗೆ ಮಸೂದೆಯೇ ಉತ್ತರ ನೀಡಿದೆ ಎಂದು ಹೇಳಿದ್ದಾರೆ.
ಮೀಸಲಾತಿ ಮಸೂದೆಗೆ ಲೋಕಸಭೆ ಭಾರೀ ಬಹುಮತದೊಂದಿಗೆ ಅಂಗೀಕಾರ ನೀಡಿದ್ದು, ಈ ಮಸೂದೆ ರಾಜ್ಯಸಭೆಯಲ್ಲಿಯೂ ಅಂಗೀಕಾರ ಸಿಗಲಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು.
ಅಸ್ಸಾಂ ಪೌರತ್ವ ತಿದ್ದುಪಡಿ ವಿಷಯದಲ್ಲೂ ಕುರಿತು ಅಲ್ಲಿನ ಜನರು ಯಾವುದೇ ಭಯ, ಆತಂಕಪಡುವ ಅಗತ್ಯವಿಲ್ಲ. ಅಲ್ಲಿನ ಮೂಲನಿವಾಸಿಗಳಿಗೆ ಮೂಲಸೌಕರ್ಯ ಕಲ್ಪಿಸುವ ಜೊತೆಗೆ ವಲಸಿಗರಿಗೂ ಆದ್ಯತೆ ನೀಡುವ ಉದ್ದೇಶದಿಂದಲೇ ಮಸೂದೆಯನ್ನು ಜಾರಿಗೆ ತರಲಾಗಿದೆ. ಈ ಮಸೂದೆಯಿಂದ ಈಶಾನ್ಯ ರಾಜ್ಯಗಳನ್ನು ದುರ್ಬಲಗೊಳಿಸಲಾಗುತ್ತಿದೆ ಎನ್ನುವ ಪ್ರತಿಪಕ್ಷಗಳ ಆರೋಪ ಸರಿಯಲ್ಲ ಎಂದರು.
ಕೇಂದ್ರ ಸರ್ಕಾರ ಕೈಗೆತ್ತಿಕೊಳ್ಳುವ ವಿವಿಧ ಯೋಜನೆಗಳಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಲು ಚೌಕಿದಾರ್ ಮುಂದಾಗಿದ್ದಾರೆ. ದೇಶದ ಅಭಿವೃದ್ಧಿಯೇ ಬಿಜೆಪಿಯ ಮೊದಲ ಆದ್ಯತೆ ಎಂದು ಹೇಳಿದರು.
ಮಹಾರಾಷ್ಟ್ರದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 30 ಸಾವಿರ ಮನೆಗಳಿಗೆ ಒಳಚರಂಡಿ ನೀರನ್ನು ಶುದ್ಧೀಕರಿಸಿ ನೀಡುವ ಯೋಜನೆಯಿಂದ ಅನೇಕರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Comments are closed.