kenduli
portal

ಕೋಮುವಾದ ಮಂಗಳೂರಿನ ಬಹುದೊಡ್ಡ ಸಮಸ್ಯೆ: ಜಿಲ್ಲಾಧಿಕಾರಿ

25

ಮಂಗಳೂರು: ನಗರದ ಈಗಿನ ಅತೀ ದೊಡ್ಡ ಸಮಸ್ಯೆ ಕೋಮುವಾದ. ಅದೇ ರೀತಿ ಪರಿಸರ ಸಮಸ್ಯೆಯೂ ಇಲ್ಲಿನ ಗಂಭೀರ ಸಮಸ್ಯೆಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೇಂಥಿಲ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಪತ್ರಕರ್ತರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಮಂಗಳೂರು ಪ್ರಜ್ಞಾವಂತ ನಾಗರಿಕ ಸಮಾಜ, ರಾಜಕೀಯ, ಮಾಧ್ಯಮ, ಶಿಕ್ಷಣ ಸಂಸ್ಥೆ ಹೀಗೆ ಎಲ್ಲಾ ವಿಭಾಗಗಳಲ್ಲಿ ತನ್ನದೇ ಆದ ಪ್ರಾಬಲ್ಯ ಹೊಂದಿದೆ. ಅಲ್ಲದೆ ಇದು ನೇರ, ನಿಷ್ಪಕ್ಷಪಾತ ಕೆಲಸಗಳಿಗೆ ಪ್ರೋತ್ಸಾಹ ನೀಡುವ ಜಿಲ್ಲೆಯೂ ಹೌದು. ಆದರೆ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಇರುವ ಮಂಗಳೂರಿನ ಸಮಸ್ಯೆಗಳಿಗೂ ಈಗ ಇರುವ ಸಮಸ್ಯೆಗಳಿಗೂ ಅಜಗಜಾಂತರ ವ್ಯತ್ಯಾಸವಿದೆ ಎಂದರು.

ಇತ್ತೀಚೆಗೆ ಜಿಲ್ಲೆಯ ಪತ್ರಕರ್ತರಿಂದ ಬ್ರ್ಯಾಂಡ್‌ ಮಂಗಳೂರು ಎಂಬ ಚಿಂತನೆ ಪ್ರಾರಂಭವಾಯಿತು. ಇದು ಒಳ್ಳೆಯ ಬೆಳವಣಿಗೆ. ಮಂಗಳೂರು ಯಾವತ್ತಿದ್ದರೂ ಉತ್ತಮ ಬ್ರ್ಯಾಂಡ್. ಇಪ್ಪತ್ತು ವರ್ಷದಿಂದೀಚೆಗೆ ಈ ಬ್ರ್ಯಾಂಡ್ ಮಂಗಳೂರಿಗೆ ಧಕ್ಕೆಯಾಗಿದೆ. ಅದನ್ನು ಮತ್ತೆ ಸರಿಪಡಿಸುವ ಪ್ರಯತ್ನವನ್ನು ಪತ್ರಕರ್ತರು ನಡೆಸಿರುವುದು ಶ್ಲಾಘನೀಯ ಸಂಗತಿ ಎಂದರು.

ಪತ್ರಕರ್ತರು ಸಮಾಜಕ್ಕೆ ಒಂದು ಅಸ್ತ್ರ ಇದ್ದಂತೆ. ಅವರು ಮುಂದೆ ಬಂದರೆ ಈಗ ಆದಂತಹ ತೊಂದರೆಗಳನ್ನು ಸರಿಪಡಿಸಬಹುದು. ಈಗಾಗಲೇ ಸಾಮಾಜಿಕ ಜಾಲತಾಣವಾಗಲಿ, ಡಿಜಿಟಲ್ ಮೀಡಿಯಾಗಳಾಗಲಿ ತುಂಬಾ ಸ್ವತಂತ್ರವಾಗಿವೆ. ಕೆಲವೇ ಕೆಲವು ಕಂಪನಿಗಳ ಸೊತ್ತಾಗಿದ್ದ ಮೀಡಿಯಾ ಈಗ ಸಮಾಜದ ಜನರ ಕೈಯಲ್ಲಿದೆ. ತಮ್ಮ ತಮ್ಮ ಅಭಿಪ್ರಾಯಗಳನ್ನು ಇಲ್ಲಿ ಎಲ್ಲರೂ ಮಂಡಿಸಬಹುದು ಎಂದು ಹೇಳಿದರು.

ಆದರೆ ಸಮಾಜದಲ್ಲಿರುವ ಕೆಲ ಕಿಡಿಗೇಡಿಗಳು ಇದನ್ನು ಇಂದು ದುರುಪಯೋಗಪಡಿಸುವ ಹುನ್ನಾರ ನಡೆಸುತ್ತಿದ್ದಾರೆ. ಗೂಗಲ್​ನಲ್ಲಿ ಈಗ ಯಾವ ಪದವನ್ನು ಜಾಸ್ತಿ ಹುಡುಕಾಟ ನಡೆಸಲಾಗುತ್ತದೆ ಅದು ಮೊದಲಿಗೆ ಬರುತ್ತದೆ. ಮಂಗಳೂರಿಗೆ ನಾಲ್ಕೈದು ಘಟನೆಗಳಿಂದ ಒಂದಷ್ಟು ಹಿನ್ನಡೆಯಾಯಿತು ಎಂದು ಸಸಿಕಾಂತ್ ಸೆಂಥಿಲ್ ಹೇಳಿದರು.

Comments are closed.