kenduli
portal

ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್‌ ಕಲಿಕೆಗೆ ಕುಮಾರಸ್ವಾಮಿ ಚಾಲನೆ

57

ಬೆಂಗಳೂರು, ಜೂನ್ 14 : :  ಸ್ಪರ್ಧಾತ್ಮಕ ಯುಗದಲ್ಲಿ ಆಂಗ್ಲ ಭಾಷೆಯ ಅನಿವಾರ್ಯತೆ ಇದ್ದು,  ಬಡಕುಟುಂಬದ ಪ್ರತಿಯೊಬ್ಬ ಮಕ್ಕಳಿಗೂ ಗುಣಾತ್ಮಕ ಶಿಕ್ಷಣ ಒದಗಿಸುವ ಉದ್ದೇಶದಿಂದ ಸರ್ಕಾರ ರಾಜ್ಯದಲ್ಲಿನ  ಒಂದು ಸಾವಿರ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ವಿಭಾಗ ತೆರೆಯಲಾಗಿದೆ ಎಂದು ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ತಿಳಿಸಿದರು.
       ಅವರು ಇಂದು ವಿಧಾನಸೌಧ ಬ್ಯಾಂಕ್ವೆಟ್  ಸಭಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ  ಒಂದು ಸಾವಿರ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 1ನೇ ತರಗತಿ ಆಂಗ್ಲ ಮಾಧ್ಯಮದ ವಿಭಾಗ ಪ್ರಾರಂಭ,  ಹೊಸ ಕೆ.ಪಿ.ಎಸ್. ಶಾಲೆಗಳ ಪ್ರಾರಂಭ ಹಾಗೂ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳ ಉದ್ವಾಟನಾ ಕಾರ್ಯಕ್ರಮವನ್ನು ಶಾಲಾ ಮಕ್ಕಳಿಂದ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ವಿದ್ಯುಕ್ತವಾಗಿ ಚಾಲನೆ ನೀಡಿ ಮಾತನಾಡಿದರು.
         ಆಂಗ್ಲ ಮಾಧ್ಯಮ ವಿಭಾಗವನ್ನು ಪ್ರಾರಂಭಿಸಿದ್ದರಿಂದ ಕನ್ನಡ ಭಾಷಾ ಬೆಳವಣಿಗೆಗೆ ಅಡ್ಡಿಯಾಗುತ್ತದೆ ಎಂಬ ಭಾವನೆ ಬೇಡ.  ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸುವುದು ಹಾಗೂ  ಸಮಾಜದಲ್ಲಿ ಸರ್ಕಾರಿ ಶಾಲೆಗಳಿಗೆ ವಿಶೇಷ  ಪ್ರಾತಿನಿಧ್ಯ ದೊರಕಿಸುವ ನಿಟ್ಟಿನಲ್ಲಿ  2018-19ನೇ ಸಾಲಿನಲ್ಲಿ ಮೊದಲ ಬಾರಿಗೆ 176 ಶಾಲೆಗಳನ್ನು ಹಾಗೂ 2019-20ನೇ ಸಾಲಿನಲ್ಲಿ  100 ಶಾಲೆಗಳನ್ನು ಗುರುತಿಸಿ, ಒಟ್ಟು 276 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಎಂದು ಘೋಷಣೆ ಮಾಡಲಾಗಿದೆ.
       ಈ ಶಾಲೆಗಳಲ್ಲಿ ಈಗಾಗಲೇ  1 ರಿಂದ 12ನೇ ತರಗತಿವರೆಗೆ ಒಟ್ಟು 67,234 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದು, ಶಾಲಾ ಮುಖ್ಯ ಶಿಕ್ಷಕರಿಗೆ ಆಡಳಿತ ಮತ್ತು ಶೈಕ್ಷಣಿಕ ನಿರ್ವಹಣೆ ಕುರಿತಂತೆ ತರಬೇತಿ ನೀಡಲಾಗಿದೆ.  1 ರಿಂದ 3ನೇ ತರಗತಿವರೆಗೆ ನಲಿ-ಕಲಿ ಮಾದರಿಯಲ್ಲಿ ಇಂಗ್ಲೀಷ್ ಭಾಷೆಯನ್ನು ಕಲಿಸುವ  ಕ್ರಮಗಳನ್ನು ಅರ್ಥೈಸಲು 268 ಶಿಕ್ಷಕರಿಗೆ ಈಗಾಗಲೇ ತರಬೇತಿ ನೀಡಲಾಗಿದೆ ಎಂzರು.  
      ವಿದ್ಯಾರ್ಥಿಗಳು  ಶಾಲೆಗೆ ಹೋಗುವ ಸಂದರ್ಭದಲ್ಲಿ ಅನಾನುಕೂಲವಾಗಬಾರದು ಎಂಬ ಉದ್ದೇಶದಿಂದ ಮಲೆನಾಡು ಪ್ರದೇಶಗಳ  ಗ್ರಾಮಗಳಲ್ಲಿ  150 ಸೇತುವೆಗಳನ್ನು ನಿರ್ಮಿಸಲು 180 ಕೋಟಿ ಮೀಸಲಿಡಲಾಗಿದೆ ಎಂದರು. 
        ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿದ್ದು,      ನಾಡಿನ ಭವಿಷ್ಯ ರೂಪಿಸುವ ಶಿಕ್ಷಕರಿಗೆ ಏನೇ ಸಮಸ್ಯೆ ಇದ್ದರೂ  ಆದಷ್ಟು ಬೇಗ  ಬಗೆಹರಿಸುತ್ತೇವೆ. ಎರಡು-ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಶಿಕ್ಷಕರ ವರ್ಗಾಣೆಯನ್ನು  ಕೌನ್ಸಿಲಿಂಗ್ ಮೂಲಕ ಪಾರದರ್ಶಕತೆಯಿಂದ  ನಡೆಸಲಾಗುವುದು.   ಮಾನವೀಯ ದೃಷ್ಟಿಯಿಂದ ಕೆಲವೊಂದು ಬದಲಾವಣೆಗಳನ್ನು ತೆಗೆದುಕೊಳ್ಳಲಾಗುವುದು.   ಶಿಕ್ಷಕರು ಪೋಷಕರಿಗೆ ಸರ್ಕಾರಿ ಶಾಲೆಗಳ ಬಗ್ಗೆ  ನಂಬಿಕೆ ಬರುವ ರೀತಿಯಲ್ಲಿ ವಿದ್ಯಾರ್ಥಿಗಳನ್ನು  ಸದೃಢಗೊಳಿಸಬೇಕು ಎಂದರು.  
      ಇದೇ ಸಂದರ್ಭದಲ್ಲಿ ಬೈಲಿಂಗ್ವಲ್ ಪುಸ್ತಕ ಬಿಡುಗಡೆ, ಕೆ.ಪಿಎಸ್. ಶಾಲೆಗಳಿಗೆ ಅನುದಾನ, 1ನೇ ತರಗತಿಯ ವಿದ್ಯಾರ್ಥಿಗಳಿಗೆ ಆಂಗ್ಲ ಮಾದ್ಯಮ ಪುಸ್ತಕ ವಿತರಿಸಲಾಯಿತು.  
     ಉಪಮುಖ್ಯ ಮಂತ್ರಿ ಡಾ: ಜಿ ಪರಮೇಶ್ವರ್ ಮಾತನಾಡಿ,  ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರಿ ಶಾಲೆ ಎಂದರೆ ನಿರ್ಲಕ್ಷಭಾವ ಬರುತ್ತಿದೆ.  ನಾವೆಲ್ಲರೂ ಸರ್ಕಾರಿ ಶಾಲೆಯಲ್ಲಿ ಕಲಿತವರೆ ಆಗಿದ್ದೇವೆ.  ಆಂಗ್ಲ ಭಾಷೆಯನ್ನು ಕಲಿತರೆ ಕರ್ನಾಟಕದ ವಿದ್ಯಾರ್ಥಿಗಳು ವಿಶ್ವಮಟ್ಟದಲ್ಲಿ ಖ್ಯಾತಿ ಪಡೆಯುತ್ತಾರೆ.  ಕನ್ನಡ ಭಾಷೆಯನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ ಮಾಡುತ್ತಿಲ್ಲ.  ಪಂಚವಾರ್ಷಿಕ ಯೋಜನೆಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕಾಗಿ ರೂ.1200 ಕೋಟಿ ಮೀಸಲಿಡಲಾಗಿದೆ ಎಂದರು. 
        ಕಾರ್ಯಕ್ರಮದ ಅಧ್ಯಕ್ತತೆಯನ್ನು  ಶಿವಾಜಿನಗರ ಕ್ಷೇತ್ರದ ಶಾಸಕರಾದ ರೋಷನ್ ಬೇಗ್ ವಹಿಸಿದ್ದರು.  
   ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಸಚಿವರಾದ ಸಾ.ರಾ. ಮಹೇಶ್, ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ, ಉಪಮೇಯರ್ ಭದ್ರೇಗೌಡ, ಶಾಸಕರಾದ ಶ್ರೀಮತಿ ಸೌಮ್ಯ ರೆಡ್ಡಿ , ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್  ಮತ್ತಿತರರು ಉಪಸ್ಥಿತರಿದ್ದರು.

Comments are closed.